ದೇವಾಪಿ
ಪ್ರತೀಪ ಹಾಗೂ ಸುನಂದೆಯರ ಹಿರಿಯ ಮಗ. ಶಂತನು ಬಾಹ್ಲೀಕ ಇವನ ತಮ್ಮಂದಿರು. ಪ್ರತೀಪನ ತರುವಾಯ ರಾಜನಾಗಬೇಕಾಗಿದ್ದ ದೇವಾಪಿ ರಾಜ್ಯವನ್ನೊಲ್ಲದೆ ಕಾಡಿಗೆ ಹೋಗಲಾಗಿ ಶಂತನುವೇ ರಾಜನಾದ. ದೇವಾಪಿಗೆ ಕುಷ್ಠರೋಗ ತಲೆದೋರಿದ ಕಾರಣ ಶಂತನುವೇ ರಾಜನಾದನೆಂದು ಮಹಾ ಭಾರತದ ಆದಿ ಪರ್ವದಲ್ಲಿ ಹೇಳಿದೆ.  ಜ್ಯೇಷ್ಠನಾದ ದೇವಾಪಿ ಅವಿವಾಹಿತನಾಗಿರುವಾಗ, ಶಂತನು ವಿವಾಹಿತನಾಗಿ ದಾರಾಗ್ನಿಯನ್ನು ನಡೆಸುತ್ತಿದುದೂ ರಾಜ್ಯವಾಳುತ್ತಿದುದೂ ದೋಷವಾದ ಕಾರಣ. ರಾಜ್ಯದಲ್ಲಿ 12 ವರ್ಷ ಕ್ಷಾಮ ಉಂಟಾಯಿತು. ಇದನ್ನು ತಿಳಿದ ಶಂಥನು ದೇವಾಪಿಯ ಕ್ಷಮೆ ಬೇಡಿ, ರಾಜ್ಯಭಾರವನ್ನು ಆತನೇ ನೋಡಿಕೊಳ್ಳಬೇಕೆಂದು ಕೇಳಿಕೊಂಡ. ಧಾರ್ಮಿಕನಾಗಿದ್ದ ಶಂತನುವೇ ರಾಜ್ಯವಾಳಬೇಕೆಂಬ ಉದ್ದೇಶವುಳ್ಳ ಅಶ್ವರಾಧನೆಂಬ ವೃದ್ಧಮಂತ್ರಿ ಆಗ ದೇವಾಪಿಗೆ ಪಾಷಂಡಮತವನ್ನು ಉಪದೇಶಿಸಿದ. ಆ ಮತವನ್ನು ಹಿಡಿದು ದೇವಾಪಿ ವೇದಗಳನ್ನು ನಿಂದಿಸಿದ ಕಾರಣ ರಾಜ್ಯವಾಳುವುದಕ್ಕೆ ಅನರ್ಹವಾದ. ಅನಂತರ ದೇವಾಪಿ ಕಲಾಪವೆಂಬ ಗ್ರಾಮದಲ್ಲಿ ಯೋಗವಿದ್ಯೆಯನ್ನು ಅಭ್ಯಾಸ ಮಾಡಿದ. ಮುಂದೆ ಕೃತಯುಗದಲ್ಲಿ ಚಂದ್ರವಂಶವನ್ನು ಈತ ಅಭಿವೃದ್ದಿಗೊಳಿಸುತ್ತಾನೆಂಬ ನಂಬಿಕೆ ಇದೆ.
(ಕೆ.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ